ಅಬಿಡಾಸ್
	ಪುರಾತನ ಈಜಿಪ್ಟ್ ನಾಗರಿಕತೆಯ ಅವಶೇಷಗಳನ್ನುಳ್ಳ ಪಟ್ಟಣ. ಶಿಲಾಯುಗದ ಕಾಲದಿಂದಲೂ ಈಜಿಪ್ಟಿನ 30ನೆಯ ರಾಜಮನೆತನದವರ ಕಾಲದವರೆಗೂ ಪ್ರಸಿದ್ಧಿಪಡೆದಿದ್ದಿತು.

	ಇಲ್ಲಿನ ಅವಶೇಷಗಳಲ್ಲಿ ಅತಿ ಮುಖ್ಯವಾದುವೆಂದರೆ ಗೋರಿಗಳು. ಮೊದಲ ಮನೆತನದ ರಾಜರ ಗೋರಿಗಳು ಬಹಳ ಚಿಕ್ಕವಾಗಿದ್ದು ಕಾಲಕ್ರಮೇಣ ವಿಸ್ತಾರವಾಗುತ್ತ ಬಂದುವು. ಗೋರಿಯ ಮಧ್ಯಭಾಗದಲ್ಲಿ ಮರದ ಪೆಟ್ಟಿಗೆಯಲ್ಲಿ ರಾಜನ ಶರೀರವನ್ನಿಟ್ಟು, ಅಕ್ಕಪಕ್ಕಗಳಲ್ಲಿ ಅಂತಃಪುರದ ಸ್ತ್ರೀಯರು, ಅಧಿಕಾರಿಗಳು, ಸೇವಕರು ಇವರ ಗೋರಿಗಳನ್ನು ಕಟ್ಟುತ್ತಿದ್ದರು. ರಾಜನ ಪರಲೋಕಯಾತ್ರೆಗೆ ಬೇಕಾದ ಆಹಾರ, ಪಾನೀಯಗಳು ಮತ್ತು ಪ್ರಾಣಿಗಳನ್ನು ಗೋರಿಯಲ್ಲಿ ಇಡುತ್ತಿದ್ದರು. ಒಬ್ಬ ರಾಜನಿಗೋಸ್ಕರ ಸುಮಾರು 500-600 ಜನಗಳನ್ನು ಬಲಿ ಕೊಡುತ್ತಿದ್ದ ನಿದರ್ಶನಗಳೂ ಇಲ್ಲಿ ದೊರಕಿವೆ.

	ಅನೇಕ ರಾಜಮನೆತನದ ದೇವಾಲಯಗಳೂ ಹೀರೋಗ್ಲಿಫಿಕ್ ಬರೆವಣಿಗೆಯುಳ್ಳ ಅನೇಕ ಮಣ್ಣಿನ ಪಾತ್ರೆಗಳೂ ಇಲ್ಲಿ ದೊರಕಿವೆ. ರಾಜಮನೆತನದ ಚಿಹ್ನೆಗಳಾದ ನರಿ, ಸಿಂಹ, ಮೀನು ಮುಂತಾದವನ್ನು ಪೂಜೆಮಾಡುತ್ತಿದ್ದರೆಂದು ತಿಳಿದುಬಂದಿದೆ. 

(ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ